ಮೆಹತಾ, ನರೇಶ್
 	1922—. ಹಿಂದಿ ಕವಿ, ಕಾದಂಬರಿಕಾರ, ಕತೆಗಾರ, ಮತ್ತು ನಾಟಕಕಾರ, ಜನನ 15-2-1922; ಶಾಜಾಪುರದ ಮಾಲವಾದ ಗುಜರಾತಿ ಕುಟುಂಬವೊಂದರಲ್ಲಿ. ಕಾಶೀ ಹಿಂದೂ ವಿಶ್ವವಿದ್ಯಾಲಯದ ಎಂ.ಎ. ಪದವೀಧರರಾದ ಇವರು ಚಿಕ್ಕವಯಸ್ಸಿನಲ್ಲಿಯೇ ಲೇಖನ ಕಾರ್ಯ ಆರಂಭಿಸಿದರು.

	ಮೆಹತಾ ಅವರ ಸಾಹಿತ್ಯ ವಿಸ್ತøತವಾದದ್ದು. ಕವಿತೆ, ಖಂಡಕಾವ್ಯ, ಕಾದಂಬರಿ, ಕತೆ, ನಾಟಕ, ಏಕಾಂಕ, ವಿಚಾರಸಾಹಿತ್ಯ, ಸಂಪಾದನೆ ಇತ್ಯಾದಿಯಾಗಿ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಬನಪಾಖೀ ಸುನೋ; ಬೊಲನೇ ದೋ ಚೀಡ್ ಕೋ; ಮೇರಾ ಸಮರ್ಪಿತ್; ಏಕಾಂತ್; ಉತ್ಸವಾ-ಇವು ಕವನಸಂಕಲನಗಳು. ಸಂಶಯ್ ಕೀ ಏಕ್ ರಾತ್; ಮಹಾಪ್ರಸ್ಥಾನ್; ಪ್ರವಾದಪರ್ವ; ಶಬರೀ-ಇವು ಖಂಡ ಕಾವ್ಯಗಳು. ಡೂಬತೇ ಮಸ್ತೂಲ್; ಯಹ್ ಪಥ್ ಬಂಧು ಥಾ; ಧೂಮಕೇತು-ಏಕ್ ಶ್ರುತಿ; ನದೀ ಯಶಸ್ವೀ ಹೈ; ದೋ ಏಕಾಂತ್; ಪ್ರಥಮ್ ಫಾಲ್ಗುನ್; ಪುನಃ ಏಕ್ ಯುಧಿಷ್ಠಿರ್; ಉತ್ತರ ಕಥಾ-ಇವ ಕಾದಂಬರಿಗಳು. ತಥಾಪಿ; ಏಕ್ ಸಮರ್ಪಿತ್ ಮಹಿಲಾ-ಕಥಾ ಸಂಕಲನಗಳು. ಸುಬತ್ ಕೀ ಘಂಟೇ; ಖಂಡಿತ್ ಯಾತ್ರಾಯೇ-ನಾಟಕಗಳು. ಸನೋವರ್ ಕೇ ಪೊಲ್; ಪಿಛಲೀ ರಾತ್ ಕೀ ಬರಫ್ (ರೇಡಿಯೋನಾಟಕ)-ಏಕಾಂಕಗಳು. ಕಾವ್ಯ ಕಾ ವೈಷ್ಣವ ವ್ಯಕ್ತಿತ್ವ-ವಿಚಾರ ಸಾಹಿತ್ಯ. ವಾಗ್ದೇವಿ-ಸಂಪಾದಿತ ಕೃತಿ.

	ಇವರು ಸಂವೇದನಾಶೀಲ ಕವಿ. ಪ್ರಕೃತಿ ಸೌಂದರ್ಯ ಮತ್ತು ಪ್ರೇಮ ಇವರ ಪ್ರಿಯ ವಿಷಯ. ವೈಚಾರಿಕವಾಗಿ ಮಾಕ್ರ್ಸ್‍ವಾದಿಗಳಾದ ಇವರ ಸಮಯ್ ದೇವತಾ ಒಂದು ದೀರ್ಘ ವಿಚಾರ ಕವಿತೆ. ವೈಚಾರಿಕತೆ ಮತ್ತು ಗೀತಾತ್ಮಕತೆ ಇವರ ಕಾವ್ಯದ ಮೂಲದ್ರವ್ಯ ಎಂದು ಹೇಳಬಹುದು.

	ಸಂಶಯ್ ಕೀ ಏಕ್ ರಾತ್ ಮೆಹತಾರ ಖಂಡಕಾವ್ಯ. ಇದರಲ್ಲಿ ಸ್ವಾತಂತ್ರ್ಯೋತ್ತರ ಭಾರತ ಮತ್ತು ಮಾನವೀಯ ಅಸ್ತಿತ್ವದಿಂದ ಕೂಡಿದ ಯುದ್ಧವನ್ನು ಕುರಿತ ಚಿಂತನೆಯಿದೆ. ಮಹಾಪ್ರಸ್ಥಾನ್ ಮೆಹತಾರ ಎರಡನೆಯ ಖಂಡಕಾವ್ಯ. ಇದು ಮಹಾಭಾರತವನ್ನು ಆಧರಿಸಿ ಬರೆದುದು. ಇದರಲ್ಲಿ ರಾಜ್ಯ ವ್ಯವಸ್ಥೆ ಮತ್ತು ವ್ಯಕ್ತಿಯ ಪರಸ್ಪರ ಸಂಬಂಧಗಳ ವಿವೇಚನೆಯಿದೆ. ಯಾತ್ರಾಪರ್ದ; ಸ್ವಾಹಾಪರ್ವ ಮತ್ತು ಸ್ವರ್ಗಪರ್ವ ಈ ಮೂರು ಖಂಡದಲ್ಲಿ ಈ ಕಾವ್ಯದ ವಸ್ತು ವಿವೇಚನೆ ಇದೆ. ಪ್ರವಾದಪರ್ವ ದೇಶದ ತುರ್ತುಪರಿಸ್ಥಿತಿಯಲ್ಲಿ ವಿರಚಿತವಾದ ಖಂಡಕಾವ್ಯ. ರಾಮಾಯಣದ ಕತೆ ಇದರ ಮೂಲಾಧಾರ. ಇದರಲ್ಲಿ ಯುಗೀನ ಸಂದರ್ಭಗಳ ವೈಚಾರಿಕ ಅಂತರ್ಮಥನವಿದೆ. ಮಾನವೀಯ ಮೌಲ್ಯಗಳ ಹುಡುಕಾಟ ಈ ಕಾವ್ಯದ ಮೂಲವಸ್ತು.

	ಮೆಹತಾರು ಹಿಂದಿಯ ಶ್ರೇಷ್ಠ ಕಾದಂಬರಿಕಾರರಲ್ಲಿ ಇಬ್ಬರು. ಡೂಬತೇ ಮಸ್ತೂಲ್ ಇವರ ಮೊದಲ ಕಾದಂಬರಿ. ಇದರಲ್ಲಿ ರಂಜನಾ ತನ್ನ ಆತ್ಮಕಥೆಯನ್ನು ಹೇಳುತ್ತಾಳೆ. ಆಗಂತುಕನನ್ನು ತನ್ನ ಪ್ರೇಮಿಯೆಂದು ತಿಳಿದು ಅವಳು ತನ್ನ ಜೀವನದ ನಗ್ನತೆಯನ್ನು ಚಿತ್ತಿಸುತ್ತಾ ಹೋಗುತ್ತಾಳೆ. ಆತ್ಮಕಥಾರೂಪದಲ್ಲಿರುವ ಈ ಕಾದಂಬರಿ ಪ್ರಭಾವಶಾಲಿಯಾಗಿದೆ. ಇದೊಂದು ಮನೋವೈಜ್ಞಾನಿಕ ಕಾದಂಬರಿ. ಧೂಮಕೇತು, ಏಕ್ ಶ್ರುತಿ ಇವರ ಇನ್ನೊಂದು ಕಾದಂಬರಿ. ಇದರಲ್ಲಿ ಭಯ, ಕಾಮ ಮತ್ತು ಅಹಂಗಳ ಯಶಸ್ವೀ ಚಿತ್ರಣವಿದೆ. ದೋ ಏಕಾಂತ್ ಮೆಹತಾರ ಮತ್ತೊಂದು ಕಾದಂಬರಿ. ವಾನೀರಾ ಮತ್ತು ವಿವೇಕನ ಅಸ್ತವ್ಯಸ್ತ ಜೀವನ ಇಲ್ಲಿ ವರ್ಣಿತವಾಗಿದೆ. ನದೀ ಯಶಸ್ವೀ ಹೈ ಕಾದಂಬರಿಯಲ್ಲಿ ಮಾನವೀಯ ಸಂವೇದನೆಗಳು ವರ್ಣಿತವಾಗಿವೆ. ಇದು ಆತ್ಮಕಥಾತಂತ್ರದಲ್ಲಿ ನಿರೂಪಣೆಗೊಂಡಿದೆ. ಯಹ್ ಪಥ್ ಬಂಧು ಥಾ ಮಹತಾರು 1963ರಲ್ಲಿ ಬರೆದ ಕಾದಂಬರಿ. ಇದು ಹಿಂದೀ ಕಾದಂಬರಿ ಕ್ಷೇತ್ರದಲ್ಲಿ ಉಲ್ಲೇಖನೀಯವಾದುದಾಗಿದೆ. ಇವರ ಕಲಾತ್ಮಕ ಸಂಯಮತೆ ಮತ್ತು ನಿರ್ಮಲತೆಗೆ ಇದು ಪ್ರಮಾಣವಾಗಿದೆ. ಇದರಲ್ಲಿ ಹಳ್ಳಿಯೊಂದರ ಸಾಮಾನ್ಯ ಶಿಕ್ಷಕನ ಜೀವನ ನಿರೂಪಿತವಾಗಿದೆ.

	ಮೆಹತಾರಿಗೆ ಅಲಹಾಬಾದಿನ ಹಿಂದೀ ಸಾಹಿತ್ಯ ಸಮ್ಮೇಳನ (1986) ಮಂಗಲಪ್ರಸಾದ್ ಪಾರಿತೋಷಿಕ ಹಾಗೂ ಗೌರವಧನವನ್ನು ನೀಡಿ ಗೌರವಿಸಿದೆ.					                 
  (ಎ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ